Tuesday, October 16, 2007

ನಗು ನನ್ನ ನಲ್ಲೆ..

ಓ ನಲ್ಲೆ! ನೀನೇಕೆ ನಗಲೊಲ್ಲೆ?
ನಿನ್ನ ದುಗುಡ ನಾ ಬಲ್ಲೆ,
ಕೋಪವೇಕೆಂದೂ ಅರಿಯಬಲ್ಲೆ,
ಆಗಸ ಕೆಂಪಾದಾಗ ನಾ ಬರಲಿಲ್ಲ,
ಆಗಲೇ ಕಣ್ಗಳೆರಡೂ ಕೆಂಪಾದವಲ್ಲೆ?
ನೋಡು ನಿನಗೇನ ತಂದಿರುವೆ?
ಪರಿಮಳ ಬೀರುವ ಮಲ್ಲೆ!
ಅದೋ ನೋಡು ಚಂದಿರನಲ್ಲಿ,
ಬಂದನು ಬಾನಂಚಲ್ಲಿ,
ಇನ್ನೂ ಕೋಪವೇ ನನ್ನಲ್ಲಿ,
ಕಣ್ಣೀರೇಕೆ ಕಣ್ಗಳಲ್ಲಿ?
ನೋಡು ಚಂದ್ರನೂ ನಗುತಿಹ,
ಬೇಡ ಕೋಪ ನನ್ನೊಂದಿಗಿಂತಹ,
ಅರೆ! ನಕ್ಕಳಲ್ಲ,
ಒಮ್ಮೆಲೇ ಮಿನುಗಿದವು ನಕ್ಷತ್ರಗಳೆಲ್ಲ!!!
ಕೆಂಪು ಕಣ್ಣು ಹೋಗಿ ಕೆನ್ನೆಯಾಯಿತಲ್ಲ!!?

ಸಾಮ್ಯತೆ..

ಹನಿಹನಿಗಳು ಬಿದ್ದು
ಧರಣಿಯ ತಣಿಸುವಂತೆ,
ಕೆನ್ನೆ ಮೇಲಿನ ಕಂಬನಿ
ಮನವ ತಣಿಸುತ್ತಿತ್ತು..

ನೆನಪುಗಳು..

ಭರವಸೆಯ ಹಾದಿಯಲ್ಲಿ
ನಡೆಯುತ್ತಾ ನಡೆಯುತ್ತಾ,
ತಿರುಗಿನೋಡಿದಾಗ ಕಂಡ
ಹೆಜ್ಜೆಗುರುತುಗಳು...

ಇಂದು..

ನೆನಪುಗಳ ನಿನ್ನೆಯೊಂದಿಗೆ
ತೊಳಲುತ್ತಾ,
ಕನಸುಗಳ ನಾಳೆಯೊಂದಿಗೆ
ಕನವರಿಸುತ್ತಾ, ಸಾಗುವುದು..

ಸಂಬಂಧ..

ಅಪ್ಪನು ಹೇಳಿದ,
  ಮಗಳೇ ಈತ ನಿನ್ನ ಬಾಳಸಂಗಾತಿಯೆಂದು.
ಮಗಳು ಒಪ್ಪಿದಳು,
  ತಲೆ ತಗ್ಗಿಸಿ ನಿಂದು.
ಆದರೆ, ಅಮ್ಮನಿಗೆ ಕಂಡಿತ್ತು,
  ಮಗಳ ಕಣ್ಣಲ್ಲಿದ್ದ ಬಿಂದು..

Monday, October 15, 2007

ವಿಪರ್ಯಾಸ..

ಎಳೆಯರಿಗೆ
   ಬೆಳೆಯುವ ಹಂಬಲ,
ಬೆಳೆದವರಿಗೆ
   ಅಳಿಯುವ ಹಂಬಲ,
ಎಲ್ಲದಕ್ಕೂ ಅನುಭವವೇ ಗೊಂದಲ..

ಜೀವನ...

ಉರಿಬಿಸಿಲಲಿ,
ಡಾಂಬರಿನ ದಾರಿಯಲಿ,
ಕೊಡೆ ಹಿಡಿದು,
ಬರಿಗಾಲಲ್ಲಿ ನಡೆದಂತೆ...